ಕೃಷ್ಣದೇವರಾಯ
 
ವಿಜಯನಗರ ಸಾಮ್ರಾಜ್ಯದ ಅರಸು ಮನೆತನಗಳಲ್ಲಿ ಮೂರನೆಯದಾದ ತುಳುವ ವಂಶಕ್ಕೆ ಸೇರಿದ ಮತ್ತು ಆ ಸಾಮ್ರಾಜ್ಯದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧನಾದ ಚಕ್ರವರ್ತಿ. ಇವನ ಆಳ್ವಿಕೆಯ ಕಾಲ 1509-1529. ಧರ್ಮರಕ್ಷಣೆಗಾಗಿ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಕಾಲದಲ್ಲಿ ತನ್ನ ಧ್ಯೇಯವನ್ನು ಸಾಧಿಸಿತಲ್ಲದೆ ಉನ್ನತ ಕೀರ್ತಿಯನ್ನೂ ಪಡೆಯಿತು. ಪೇಸ್, ನ್ಯೂನಿಜ್, ಬರ್ಬೊಸ ಮೊದಲಾದ ಪೋರ್ಚುಗೀಸ್ ಪ್ರವಾಸಿಗಳು ಇವನ ಆಸ್ಥಾನದಲ್ಲಿದ್ದು, ರಾಜನ ವ್ಯಕ್ತಿತ್ವ ಮತ್ತು ವೈಭವಗಳನ್ನು ಕಣ್ಣಾರೆ ಕಂಡು ಅವನ್ನು ವಿವರವಾಗಿ ವರ್ಣಿಸಿದ್ದಾರೆ. ದೊರೆ ಸ್ಫುರದ್ರೂಪಿ. ಆತ ಎತ್ತರವಾಗಿಲ್ಲದಿದ್ದರೂ ನಿತ್ಯವೂ ಗರಡಿ ಸಾಧನೆ ಮಾಡುತ್ತಿದ್ದುದರಿಂದ ಬಲವಾದ ಮೈಕಟ್ಟು ಪಡೆದಿದ್ದ. ಮುಖದಲ್ಲಿ ಸಿಡುಬಿನ ಕಲೆಗಳಿದ್ದರೂ ವರ್ಚಸ್ಸು ತುಂಬಿತ್ತು. ವಿದೇಶಿಯರಲ್ಲಿ ಇವನಿಗೆ ತುಂಬ ಗೌರವವಿತ್ತೆಂದೂ ಈತ ನ್ಯಾಯಪರನೆಂದೂ ಹೇಳಲಾಗಿದೆ. ಕತ್ತಿವರಸೆ, ಕುದುರೆ ಸವಾರಿ, ಕುಸ್ತಿ ಇವು ಈ ಈತನ ದಿನಚರಿಗಳಾಗಿದ್ದುವು. ಈತ ಸೂರ್ಯೋದಯಕ್ಕೆ ಮುಂಚೆಯೇ ಅಂಗಸಾಧನೆಗಳಲ್ಲಿ ನಿರತನಾಗುತ್ತಿದ್ದ. ಕೆಲವು ಬಾರಿ ಮುಂಗೋಪಿಯಾದರೂ ಕಾಲವನ್ನು ವ್ಯರ್ಥಮಾಡದೆ ಯಾವಾಗಲೂ ಜನರ ಯೋಗಕ್ಷೇಮವನ್ನೇ ಚಿಂತಿಸುತ್ತಿದ್ದ-ಇದು ಪೇಸನ ಬರಹಗಳಿಂದ ತಿಳಿದುಬಂದಿರುವಂತೆ ಕೃಷ್ಣದೇವರಾಯನ ವ್ಯಕ್ತಿತ್ವ. ಇವನ ರಾಜ್ಯಾರೋಹಣದ ವಿಷಯವಾಗಿ ಜನಜನಿತವಾದ ಕಥೆಯೊಂದಿದೆ. ಇವನಿಗೆ ಹಿಂದೆ ದೊರೆಯಾಗಿದ್ದ ಇಮ್ಮಡಿ ನರಸಿಂಹ ತನ್ನ 8 ವರ್ಷದ ಮಗನಿಗೆ ಪಟ್ಟ ಕಟ್ಟುವ ಸಲವಾಗಿ, ಬಲತಮ್ಮನಾದ ಕೃಷ್ಣದೇವನನ್ನು ಕೊಂದು ಅವನ ಕಣ್ಣುಗುಡ್ಡೆಗಳನ್ನು ತನಗೆ ತೋರಿಸುವಂತೆ ಮಂತ್ರಿ ಸಾಳುವ ತಿಮ್ಮರಸನಿಗೆ ಆಜ್ಞಾಪಿಸಿದುದಾಗಿಯೂ ಮಂತ್ರಿ ಇವನನ್ನು ಗೋಪ್ಯವಾಗಿಟ್ಟು ಮೇಕೆಯ ಕಣ್ಣುಗುಡ್ಡೆಗಳನ್ನು ದೊರೆಗೆ ತೋರಿಸಿದನೆಂದೂ ನರಸಿಂಹ ನೆಮ್ಮದಿಯಿಂದ ಸತ್ತ ಅನಂತರ ಕೃಷ್ಣದೇವನಿಗೆ ಪಟ್ಟಕಟ್ಟಿದುದಾಗಿಯೂ ಈ ಕಥೆ ತಿಳಿಸುತ್ತದೆ. ಇದನ್ನು ನ್ಯೂನಿಜ್ ಬರೆದಿಟ್ಟಿದ್ದಾನೆ. ಆದರೆ ಇದನ್ನು ಸಮರ್ಥಿಸುವ ಐತಿಹಾಸಿಕ ದಾಖಲೆಗಳು ಯಾವುವೂ ದೊರಕಿಲ್ಲ. ಆ ಸೋದರರಲ್ಲಿ ಅನ್ಯೋನ್ಯತೆ ಇದ್ದುದಾಗಿಯೂ ತಿಳಿದು ಬರುತ್ತದೆ.

	ಕೃಷ್ಣದೇವರಾಯ ಪಟ್ಟಕ್ಕೆ ಬಂದೊಡನೆ ಸೈನ್ಯವನ್ನು ಸುವ್ಯವಸ್ಥೆಗೊಳಿಸಿ ಯುದ್ಧ ನಿರತನಾಗಬೇಕಾಯಿತು. ದಕ್ಷಿಣದಲ್ಲಿ ಉಮ್ಮತ್ತೂರಿನ ಗಂಗರಾಜನ ಮೇಲೆ ಮಾಡಿದ ಯುದ್ಧದಲ್ಲಿ (1510-1512) ಉಮ್ಮತ್ತೂರು, ಪೆನುಗೊಂಡೆ, ಶಿವಸಮುದ್ರ ಮತ್ತು ಶ್ರೀರಂಗಪಟ್ಟಣಗಳು ಇವನ ವಶವಾದುವು. ಈ ಪ್ರದೇಶಗಳನ್ನು ಶ್ರೀರಂಗಪಟ್ಟಣ ಪ್ರಾಂತ್ಯವನ್ನಾಗಿ ಮಾಡಲಾಯಿತು. ಅನಂತರ ಈತ ಪೂರ್ವ ದೇಶಕ್ಕೆ ನುಗ್ಗಿ ಕೊಂಡವೀಡು, ಉದಯಗಿರಿ ಕೋಟೆಗಳನ್ನು ಹಿಡಿದು, ಪ್ರತಾಪರುದ್ರ ಗಜಪತಿಯನ್ನು ಸೋಲಿಸಿ, ಅವನ ಮಗಳಾದ ಜಗನ್ಮೋಹಿನಿಯನ್ನು ಮದುವೆಯಾದ. ಈ ವಿಜಯದ ಅನಂತರ 1514ರಲ್ಲಿ ತಿರುಮಲೈಗೆ ಹೋಗಿ ಶ್ರೀ ವೆಂಕಟೇಶ್ವರನಿಗೆ ಕಾಣಿಕೆ ಸಲ್ಲಿಸಿದ. ಆ ಸಂದರ್ಭದಲ್ಲಿ ಮಾಡಿಸಲಾದ ಈತನ ಮತ್ತು ರಾಣಿಯರಾದ ತಿರುಮಲಾದೇವಿ ಮತ್ತು ಚಿನ್ನಾದೇವಿಯರ ಪ್ರತಿಮೆಗಳು ಈಗಲೂ ಆ ದೇವಸ್ಥಾನದಲ್ಲಿವೆ. ಮಾಧ್ವ ಯತಿಗಳಾದ ಶ್ರೀ ವ್ಯಾಸರಾಯರು ಆ ಸಂದರ್ಭವನ್ನು ಕೊಂಡಾಡಿ ದೇವರನಾಮಗಳನ್ನು ರಚಿಸಿದ್ದಾರೆ. 1520ರಲ್ಲಿ ನಡೆದ ರಾಯಚೂರು ಯುದ್ಧದಲ್ಲಿ ಕೃಷ್ಣದೇವರಾಯನಿಂದ ಬಿಜಾಪುರ ಸುಲ್ತಾನ ಸಂಪೂರ್ಣವಾಗಿ ಸೋತ. ಕರ್ಣಾಟಕ ಸಾಮ್ರಾಜ್ಯದ ಎಲ್ಲೆಗಳು ಉತ್ತರದಲ್ಲಿ ಕೃಷ್ಣಾ ಗೋದಾವರಿಗಳವರೆಗೂ ಪೂರ್ವಪಶ್ಚಿಮಗಳಲ್ಲಿ ಸಮುದ್ರತೀರದವರೆಗೂ ದಕ್ಷಿಣದಲ್ಲಿ ಕನ್ಯಾಕುಮಾರಿಯವರೆಗೂ ವಿಸ್ತರಿಸಿ ದಕ್ಷಿಣ ಭಾರತದಲ್ಲಿ ಶಾಂತಿ ನೆಲಸಿತು. ಪೂರ್ವ ಪಶ್ಚಿಮ ದಕ್ಷಿಣ ಸಮುದ್ರಾಧೀಶ್ವರ ಎಂಬ ಬಿರುದು ಕೃಷ್ಣದೇವರಾಯನಿಗೆ ಸಾರ್ಥಕವಾಯಿತು.

	ಕೃಷ್ಣದೇವರಾಯ ಪ್ರಖ್ಯಾತನಾಗಿರುವುದು ತನ್ನ ವಿಜಯಯಾತ್ರೆಗಳಿಗಿಂತ ಅಧಿಕವಾಗಿ ತಾನು ಸಂಸ್ಕøತಿಗೆ ಕೊಟ್ಟ ಪ್ರೋತ್ಸಾಹದಿಂದಾಗಿ. ಈತ ಮಹಮ್ಮದೀಯರಿಂದ ನಾಶವಾಗಿದ್ದ ಸುಪ್ರಸಿದ್ಧ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಮಾಡಿ, ಹಿಂದೂಧರ್ಮದ ಪುನರೇಳಿಗೆಗೆ ಕಾರಣನಾದ. ಉದಯಗಿರಿಯಿಂದ ಬಾಲಗೋಪಾಲವಿಗ್ರಹವನ್ನು ತರಿಸಿ ರಾಜಧಾನಿಯಲ್ಲಿ ಪ್ರತಿಷ್ಠಿಸಿದುದಲ್ಲದೆ, ಹಂಪಿಯ ವಿಜಯವಿಠಲಸ್ವಾಮಿಯ ಕಲಾಪೂರ್ಣವಾದ ದೇವಾಲಯವನ್ನು ಕಟ್ಟಿಸಿದ. ಈತ ಎಲ್ಲ ಮತಗಳಿಗೂ ಆಶ್ರಯದಾತನಾಗಿದ್ದ. ಮಾಧ್ವ ಗುರು ವ್ಯಾಸರಾಯರು ವೈಷ್ಣವಮತವನ್ನೂ ಶ್ರೀವೈಷ್ಣವ ಗುರು ತಾತಾಚಾರ್ಯರು ಶ್ರೀವೈಷ್ಣವ ಮತವನ್ನೂ ವಲ್ಲಭಾಚಾರ್ಯರು ಶುದ್ಧಾದ್ವೈತ ಮತವನ್ನೂ ಪ್ರಚಾರ ಮಾಡಿದರು. ಪಂಡಿತರಿಂದಲೂ ಕವಿಗಳಿಂದಲೂ ಇವನ ಆಸ್ಥಾನ ತುಂಬಿತ್ತು. ತೆಲುಗು ಸಾಹಿತ್ಯ ಬಹಳ ಮಟ್ಟಿಗೆ ಅಭಿವೃದ್ಧಿ ಹೊಂದಿತು. ಇವರ ಕಾಲ ಸಾಹಿತ್ಯ ರಂಗದಲ್ಲಿ ಸ್ವರ್ಣಯುಗವೆಂದು ಪ್ರಸಿದ್ಧವಾಗಿದೆ. ಪ್ರಸಿದ್ಧರಾದ ಅಲ್ಲಸಾನಿಪೆದ್ದನ, ಪಿಂಗಳಿಸೂರನ, ಮಲ್ಲನ, ತಿಮ್ಮನ, ರಾಮಭದ್ರ, ತೆನಾಲಿ ರಾಮಕೃಷ್ಣ, ಧೂರ್ಜಟಿ, ರುದ್ರಕವಿ ಎಂಬ ಅಷ್ಟದಿಗ್ಗಜರು ಇವನ ಆಸ್ಥಾನವನ್ನು ಅಲಂಕರಿಸಿ ಉದ್ಗ್ರಂಥಗಳನ್ನು ರಚಿಸಿದರು. ಮನುಚರಿತ್ರೆಯನ್ನು ಬರೆದ ಅಲ್ಲಸಾನಿ ಪೆದ್ದನ ಇವರಲ್ಲಿ ಅಗ್ರಗಣ್ಯ. ಕೃಷ್ಣದೇವರಾಯ ಇತರ ಭಾಷೆಗಳಿಗೂ ಇದೇ ರೀತಿಯಾದ ಪ್ರೋತ್ಸಾಹ ನೀಡಿದ. ತಿಮ್ಮಕವಿ ಇವನ ಆಶ್ರಯದಲ್ಲಿ ಕನ್ನಡದಲ್ಲಿ ಗದುಗಿನ ಭಾರತವನ್ನು ಪೂರ್ತಿ ಮಾಡಿದ. ಪುರಂದರದಾಸರು ಅಮೋಘವಾದ ದೇವರನಾಮಗಳನ್ನು ಸೃಷ್ಟಿಸಿದರು. ಸಂಸ್ಕøತದಲ್ಲಿ ಜಾಂಬವತೀ ಕಲ್ಯಾಣ, ಮದಾಲಸ ಚರಿತ್ರೆ, ಸತ್ಯವಧೂ ಪ್ರೀಣನ, ಸಕಲಕಥಾ ಸಾರಸಂಗ್ರಹಂ, ಜ್ಞಾನಚಿಂತಾಮಣಿ, ರಸಮಂಜರೀ-ಎಂಬ ಗ್ರಂಥಗಳನ್ನೂ ತೆಲುಗಿನಲ್ಲಿ ಅಮುಕ್ತಮಾಲ್ಯದ ಎಂಬ ಕಾವ್ಯವನ್ನೂ ಕೃಷ್ಣದೇವರಾಯನೇ ರಚಿಸಿದನೆಂದು ಹೇಳಲಾಗಿದೆ. ಇವುಗಳಲ್ಲಿ ಸದ್ಯಕ್ಕೆ ದೊರಕಿರುವವು ಜಾಂಬವತೀ ಪರಿಣಯ ಮತ್ತು ಅಮುಕ್ತಮಾಲ್ಯದ. ಕೃಷ್ಣದೇವರಾಯನ ವೈಭವ ಭಾರತದ ಚರಿತ್ರೆಯಲ್ಲಿ ಚಿರಸ್ಮರಣೀಯವಾದುದು.      		 							(ಬಿ.ಎಸ್.ಕೆ.)  
     
	ಆಮುಕ್ತ ಮಾಲ್ಯದ: ತೆಲುಗಿನ ಪಂಚಮಹಾಕಾವ್ಯಗಳಲ್ಲೊಂದೆನಿಸಿದ ಅಮುಕ್ತಮಾಲ್ಯದ ಅದರ ಹೆಸರೇ ಹೇಳುವಂತೆ ತಾನು ಮುಡಿದ ಹೂವನ್ನು ದೇವರಿಗೆ ಕೊಟ್ಟು ಆತನ ಪ್ರಣಯಪಾತ್ರಳಾಗಿ ಅವನನ್ನೇ ಮದುವೆಯಾದ ಗೋದಾದೇವಿಯ ಚರಿತ್ರೆಯನ್ನು ಒಳಗೊಂಡ ಗ್ರಂಥ. ವಿಷ್ಣುಚಿತ್ತನೆಂಬ ಭಾಗವತೋತ್ತಮನ ಪುಣ್ಯಕಥೆಯೂ ಇರುವುದರಿಂದ ಗ್ರಂಥಕ್ಕೆ ವಿಷ್ಣುಚಿತ್ತೀಯಮು ಎಂಬ ಪರ್ಯಾಯನಾಮವೂ ಇದೆ. ವಿಷ್ಣುಚಿತ್ತ ಮತ್ಸ್ಯಧ್ವಜ ಮಹಾರಾಜನ ಆಸ್ಥಾನದಲ್ಲಿ ವಿಷ್ಣುವೇ ಪರದೈವವೆಂಬ ಸಿದ್ಧಾಂತವನ್ನು ಸ್ಥಾಪಿಸಿ ಅನ್ಯವಾದಿಗಳನ್ನು ಗೆದ್ದವನು. ಇವನ ಕಥೆ ಹೇಳಿ ಶ್ರೀವೈಷ್ಣವ ಮತದ ಪ್ರಾಶಸ್ತ್ಯ ಪ್ರತಿಪಾದನೆ ಮಾಡಬೇಕೆಂಬುದು ಕವಿಯ ಮುಖ್ಯ ಗುರಿಯಾಗಿದೆ. ತನ್ನ ಉದ್ದೇಶಕ್ಕೆ ತಕ್ಕಂತೆ ಹರಿಭಕ್ತಿ, ಹರಿಕೀರ್ತನೆ, ಹರಿಕಥಾಶ್ರವಣ-ಇವುಗಳ ಮಹಿಮಾತಿಶಯವನ್ನು ಕಾವ್ಯದುದ್ದಕ್ಕೂ ಕವಿ ಹೊಗಳಿದ್ದಾನಲ್ಲದೆ ಶ್ರೀವೈಷ್ಣವ ಧರ್ಮದ ಹಿರಿಮೆಯನ್ನು ಬಾಯಿ ತುಂಬ ಕೊಂಡಾಡಿದ್ದಾನೆ.

	ಮತ್ಸ್ಯಧ್ವಜನ ಕಥೆ, ಗೋದಾದೇವಿಯ ಕಥೆ. ಮಾಲದಾಸರಿ ಮತ್ತು ಬ್ರಹ್ಮರಾಕ್ಷಸರ ವೃತ್ತಾಂತ, ಖಾಂಡಿಕ್ಯಕೇಶಿಧ್ವಜರ ಚರಿತ್ರೆ, ವಿಷ್ಣುಚಿತ್ತನ ಭಕ್ತಿಜೀವನ ವೃತ್ತಾಂತ-ಹೀಗೆ ಹಲವು ಕಥೆಗಳನ್ನು ಒಳಗೊಂಡ ಈ ಕಾವ್ಯದಲ್ಲಿ ವಸ್ತ್ವೈಕ್ಯವಿಲ್ಲವೆಂದು ತೋರಬಹುದಾಗಿದೆ. ಆದರೆ ಈ ಎಲ್ಲ ಕಥೆಗಳನ್ನೂ ರಾಯ ಹೇಳಹೊರಟಿರುವುದು ತನಗೆ ಪೂಜ್ಯವಾದ ಶ್ರೀವೈಷ್ಣವ ಧರ್ಮ ಪ್ರಾಶಸ್ತ್ಯ ಪ್ರತಿಪಾದನೆಯ ಏಕೈಕ ಧ್ಯೇಯವನ್ನು ಸಾಧಿಸಿಕೊಳ್ಳುವುದಕ್ಕಾಗಿ. ಆದರೆ ಈ ಕಾವ್ಯದಲ್ಲಿ ತಾನು ಮುಡಿದ ಮಾಲೆಯನ್ನು ದೇವರಿಗೆ ಅರ್ಪಿಸಿ ಅವನ ಪ್ರೇಮಕ್ಕೆ ಪಾತ್ರಳಾದ ಗೋದಾದೇವಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗಿದೆ.

	ಏಳು ಆಶ್ವಾಸಗಳಷ್ಟು ವಿಸ್ತಾರವಾದ ಈ ಕಾವ್ಯ ಮುಖ್ಯವಾಗಿ ಶ್ರೀವೈಷ್ಣವ ಸಿದ್ಧಾಂತದ ಹಿರಿಮೆಯನ್ನು ಸ್ಥಾಪಿಸುವ ಉದ್ದೇಶ ಸಾಧನೆಗೋಸ್ಕರವೇ ರಚಿತವಾದುದಾದರೂ ಇದರಲ್ಲಿ ರಾಯನ ರಸಿಕತೆ, ಪಾಂಡಿತ್ಯ, ಲೋಕಾನುಭವ, ರಾಜನೀತಿ, ಚೆನ್ನಾಗಿ ಪ್ರಕಟವಾಗಿವೆ. ಅಂದಿನ ಜನಜೀವನದ ರಮ್ಯಚಿತ್ರವೂ ಇಲ್ಲಿದೆ. ವಿಲ್ಲುಬುತ್ತೂರಿನ ವರ್ಣನೆ, ವಿಷ್ಣುಚಿತ್ತನ ಮನೆಯ ಅತಿಥಿ ಸತ್ಕಾರವರ್ಣನೆ, ತಮಿಳು ಕನ್ಯೆಯರು, ಅವರ ಪರಿಹಾಸ್ಯಗಳ ವರ್ಣನೆ ಮುಂತಾದ ಹಲವು ಚಿತ್ರಗಳು ಗ್ರಂಥವನ್ನು ಓದಿಮುಗಿಸಿದ ಮೇಲೆಯೂ ಓದುಗರ ಚಿತ್ತಭಿತ್ತಿಯ ಮೇಲೆ ನಿಲ್ಲುತ್ತವೆ. ಕೃಷ್ಣದೇವರಾಯ ಪ್ರಕೃತಿ ವರ್ಣನೆಯಲ್ಲಿ ದಕ್ಷ. ಆಟವಿಕ ಮೃಗಗಳ ಚಲನವಲನಗಳನ್ನೂ ವನಸಂಚಾರಿಗಳ ರೀತಿನೀತಿಗಳನ್ನೂ ಸೂಕ್ಷ್ಮವಾಗಿ ಗಮನಿಸಿದ್ದಾನೆ. ಚಳಿಗಾಲದಲ್ಲಿ ರೆಡ್ಡಿ ಜನ ತಮ್ಮ ಮನೆಗಳಲ್ಲಿ ಅಳವಡಿಸಿಕೊಳ್ಳುವ ಜೀವನ ಸೌಲಭ್ಯಗಳನ್ನೂ ಅವರ ನಿತ್ಯವ್ಯವಹಾರಕ್ರಮಗಳನ್ನೂ ತನ್ನ ಕಾವ್ಯದಲ್ಲಿ ಅಲ್ಲಲ್ಲಿ ಸೂಚ್ಯವಾಗಿ ವರ್ಣಿಸಿ ಹೇಳಿರುವುದು ಮನೋಜ್ಞವಾಗಿದೆ. ವಿಜಯನಗರ ಸಾಮ್ರಾಜ್ಯಕ್ಕೆ ಅಧಿಪತಿಯಾಗಿ ಅಮಿತವೈಭವದಿಂದ ಬಾಳಿದ ರಾಯ ತನ್ನ ಕಾಲದ ಸಾಧಾರಣ ಜನರ ಕಷ್ಟಸುಖಗಳನ್ನೂ ಆದರ್ಶಗಳನ್ನೂ ಅವರ ಬದುಕಿನ ರೀತಿಯನ್ನೂ ಚೆನ್ನಾಗಿ ಬಲ್ಲವನೆಂಬುದು ಈ ಕೃತಿಯಿಂದ ಸುವ್ಯಕ್ತವಾಗುತ್ತದೆ.

	ಅಲ್ಲಸಾನಿ ಪೆದ್ದನ ರಚಿಸಿದ ಕೃಷ್ಣರಾಯ ಪ್ರಶಂಸಾತ್ಮಕವಾದ ಕೆಲವು ಪದ್ಯಗಳು ಆಮುಕ್ತಮಾಲ್ಯದದಲ್ಲೂ ಬಂದಿವೆ. ಆದ್ದರಿಂದ ಈ ಗ್ರಂಥವನ್ನೂ ಪೆದ್ದನ ಕವಿಯೇ ರಚಿಸಿ ರಾಯನ ಹೆಸರಿನಲ್ಲಿ ಪ್ರಚುರಪಡಿಸಿರಬೇಕೆಂಬ ಒಂದು ವಾದ ಇದೆ. ಆದರೆ ಈ ಕೃತಿಯ ಶೈಲಿ ಪೆದ್ದನನ ಸರಳ ಶೈಲಿಯಲ್ಲ. ಮನುಚರಿತ್ರದಂಥ ದ್ರಾಕ್ಷಾಪಾಕದ ಕಾವ್ಯ ರಚಿಸಿದ ಪೆದ್ದನ ಈ ಶಿಲಾಪಾಕ, ವಜ್ರಪಾಕ, ಎಂದು ವರ್ಣಿಸಬಹುದಾದ ಆಮುಕ್ತಮಾಲ್ಯದವನ್ನು ಬರೆಯುವುದು ಸಂಭವವಲ್ಲ-ಎಂದು ಹೇಳಲಾಗಿದೆ. ಇದು ಪ್ರೌಢಶೈಲಿಯ ಪಂಡಿತಕೃತಿ. ಅಪೂರ್ವ ಪದಪ್ರಯೋಗ, ಅಲಂಕಾರ ಶೈಲಿ, ಸಂಸ್ಕøತ ಪದಬಾಹುಳ್ಯ ಮೊದಲಾದ ಹಲವು ನಿಮಿತ್ತಗಳಿಂದ ಈ ಕೃತಿರತ್ನ ತಕ್ಕ ವ್ಯಾಖ್ಯಾನದ ನೆರವಿಲ್ಲದಿದ್ದರೆ ಸಾಮಾನ್ಯ ವಾಚಕರಿಗೆ ಸರ್ವಥಾ ಅರ್ಥವಾಗುವುದಿಲ್ಲ. ತೆಲಗು ದೇಶದ ಹಲವು ವಿದ್ವಾಂಸರು ಈ ಕೃತಿಗೆ ವಿಸ್ತಾರವಾದ ವ್ಯಾಖ್ಯಾನಗಳನ್ನು ರಚಿಸಿದ್ದಾರೆ. ವೇದಂ ವೆಂಕಟರಾಯಶಾಸ್ತ್ರಿಗಳು ರಚಿಸಿದ ಸಂಜೀವಿನೀ ಮತ್ತು ವಾವಿಳ್ಳ ರಾಮಸ್ವಾಮಿ ಶಾಸ್ತ್ರಿಗಳು ಚದಲವಾಡ ಸೀತಾರಾಮಶಾಸ್ತ್ರಿಗಳ ನೆರವಿನಿಂದ ರಚಿಸಿದ ರುಚಿ ಎಂಬ ಎರಡು ವ್ಯಾಖ್ಯಾನಗಳು ಸುಪ್ರಸಿದ್ಧವಾಗಿವೆ.   		  										
(ಕೆ.ವಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ